Powered By Blogger

ಬುಧವಾರ, ಜುಲೈ 25, 2012

ಹುಡುಕಾಟ


ಹುಡುಕಾಟ

ಇಲ್ಲದರ ಹುಡುಕಾಟ
ಈ ಬಾಳ ಹುಡುಗಾಟ
ಬಾಲನಿಗೆ ಬೆಳೆವಾಸೆ
ಬಾಲ ಬೆಳೆದರೆ ಕೋತಿ
ಅದು ಬೆಳೆದ ಬಾಲ
ನಾದ ಹರೆಯ ಕರೆದು ಕೂಗೆ
ಬರದ ಮಳೆಯ ಇಳೆಯು ಕೂಡೆ
ಬರದ ಛಾಯೆ ಮಾಯ
ಇರದ ಬರ ಬರದ ಮಳೆ
ಬರಡಾದ ಇಳೆ ಬರದ ಮಳೆ
ಇಳೆಯ ಕಳೆ
ಬೆಳೆದ ಬಾಲವ ಕಳೆದು ಬೆಳೆ
ಬೆಳೆದು ಕಳೆ ಬರಡಾದ ಹೊಲ
ಕೊನರುವುದು ಕಳೆ
ತೆಗೆದಿಡಲು ಬೆಳೆ
ಬಾಲವಿಲ್ಲದ ಬಾಲ
ಆಗುವೆವು ಚಿರಕಾಲ.

ಭಾನುವಾರ, ಜುಲೈ 22, 2012

ಆರು ಅರಿವರು ಅರಿ ಷಡ್ವರ್ಗಗಳ?


ಆರು ಅರಿವರು ಅರಿ ಷಡ್ವರ್ಗಗಳ?

ಕಾಮ, ಕ್ರೋಧ, ಮೋಹ, ಲೋಭ, ಮದ ಮತ್ತು ಮತ್ಸರ. ಇವುಗಳನ್ನು ಆರು ಶತೃಗಳೆಂದು ಬಲ್ಲವರು ಹೇಳುತ್ತಾರೆ.

ನನಗೆ ಇದು ಜಿಜ್ಙಾಸೆಯ ವಿಷಯ.
ಮೋಕ್ಷದ ಗುರಿಯಿರುವಾಗ ಇದು ಸರಿ, ಆರು ವೈರಿಗಳು.

ನಾವು ಕುಳಿತು ಕೇಳುವುದು ಹೆಚ್ಚಾಗಿ ಸರ್ವ ಸಂಗ ಪರಿತ್ಯಾಗಿಗಳಾದ ಸಂನ್ಯಾಸಿಗಳೋ ಅಥವಾ ಶ್ರೀ, ಶ್ರೀ ಎಂದು ಸಂಬೋಧಿಸಲ್ಪಡುವ ಮಹಾತ್ಮರಿಂದ.

ಅವರು ಹೇಳುವ ಈ ಆರು ವೈರಿಗಳು ಅವರ ವೈರಿಗಳು ಸರಿ, ಆದರೆ ನಮಗೂ ಈ ಆರೂ ವೈರಿಗಳೇ? ಎಂಬುದು ವಿಷಯ.

ನನ್ನ ದೃಷ್ಟಿಯಲ್ಲಿ, ಮದ ಮತ್ಸರಗಳೆರಡು ಸಾರ್ವತ್ರಿಕ ವೈರಿಗಳು.

ಕಾಮ, ಇರಬೇಕು. ಜಗತ್ತು ಚಲಿಸುತ್ತಿರುವುದೇ ಕಾಮದಿಂದ. ಕಾಮಕ್ಕೆ ಕಾಮ(ಅಲ್ಪ ವಿರಾಮ) ಕೊಟ್ಟರೆ ಜಗತ್ತು ನಿಶ್ಚಲ ವಾಗಬಹುದು.

ನಮ್ಮ ಆಸೆಯು ನಮಗೆ ವೈರಿಯಾಗಬಹುದಾದರೂ ಆಸೆಯೇ ವೈರಿಯಲ್ಲ. ಆಸೆಯೊಂದು ಕುದುರೆಯಂತೆ, ಅದರ ಕಡಿವಾಣ ನಮ್ಮ ಹಿಡಿತದಲ್ಲಿದ್ದು ನಾವು ಅದರ ಮೇಲೆ ಸವಾರಿ ಮಾಡಿದರೆ ಅದು ನಮ್ಮನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಲ್ಲುದು. ಪಂಚಭೂತಗಳಲ್ಲಿ ಕಾಮವನ್ನು ವಾಯುವನ್ನು ಹೋಲಿಸಬಹುದು.

ಇನ್ನು ಕ್ರೋಧ. ಕ್ರೋಧವೊಂದು ಆಯುಧ. ಇದನ್ನು ಉಪಯೋಗಿಸುವ ತರಬೇತಿಯಿಲ್ಲದಿದ್ದರೆ ಅನಾಹುತವಾಗಬಹುದು. ಆದರೆ ಕ್ರೋಧದ ಉಪಯೋಗವೂ ಬಹಳ. ತಪ್ಪು ನೋಡಿದಾಗ, ಮಾಡಿದಾಗ ತಿದ್ದಲು ಕ್ರೋಧವನ್ನು ಉಪಯೋಗಿಸಬೇಕು.  ಪಂಚಭೂತಗಳಲ್ಲಿ ಕ್ರೋಧವನ್ನು ಅಗ್ನಿಗೆ ಹೋಲಿಸಬಹುದು.

ಇನ್ನು ಮೋಹ, ಮೋಹವೂ ಜಗತ್ತಿನ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ಜಗತ್ತಿನಲ್ಲಿ ಇರುವವರೆಗೆ ಮೋಹದಿಂದಿರುವ ಅನಿವಾರ್ಯತೆಯಿದೆ, ಮೋಹದಲ್ಲಿ ಆ ತುಡಿತವಿದೆ. ಸಂಸಾರಿಗೆ ಒಂದು ಮೋಹವಾದರೆ ಸಂನ್ಯಾಸಿಗೂ ಮೋಕ್ಷದ ಮೋಹ. ನಾವು ಹೇಳುವ ಸಂಸ್ಕೃತಿ, ಭಾಷೆಗಳು ಉಳಿಯಲು ಮೋಹ ಅನಿವಾರ್ಯ. ಈ ಮೋಹ ಪಂಚಭೂತಗಳಾದ ಭೂಮಿ ಮತ್ತು ನೀರನ್ನು ಪ್ರತಿನಿಧಿಸುತ್ತವೆ.
ಲೋಭ, ಮದ ಮತ್ತು ಮತ್ಸರಗಳನ್ನು ನಮ್ಮೆಲ್ಲರ ವೈರಿಯೆಂದುಕೊಳ್ಳಬಹುದು. ಆದರೆ ಕಾಮ, ಕ್ರೋಧ ಮತ್ತು ಮೋಹವನ್ನು ಸಂಸಾರಿಯಾದವನು ವೈರಿಯೆಂದು ಪರಿಗಣಿಸುವಂತಿಲ್ಲ. ಅವು ನಮ್ಮ ಅಂಕೆಯಲ್ಲಿರುವ ಆಳಾಗಬೇಕು, ನಮ್ಮ ಸಾಧನವಾಗಬೇಕು. ನಮ್ಮ ಬುದ್ಧಿಯೆಂಬ ಅಂಕುಶದಿಂದ ಈ ಮೂರೂ ಆನೆಗಳನ್ನು ಅಂಕೆಯಲ್ಲಿಟ್ಟುಕೊಳ್ಳಬೇಕು.